ಗ್ಯಾನಿ ಜೈಲ್‍ಸಿಂಗ್ -
	1916-1994. ಭಾರತದ ಏಳನೆಯ ರಾಷ್ಟ್ರಪತಿ. ಶ್ರೀಸಾಮಾನ್ಯ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರ. ಅತ್ಯಂತ ಶ್ರೀಸಾಮಾನ್ಯನೊಬ್ಬ ಅನುಪಮ ಬುದ್ಧಿ ಮತ್ತು ಸಹೃದಯಿ ಗುಣಗಳ ಸಮ್ಮಿಶ್ರಣದ ವ್ಯಕ್ತಿಯೊಬ್ಬರು ರಾಷ್ಟ್ರಸೇವೆಯ ಅತ್ಯುನ್ನತ ಪದವಿಯನ್ನು ಅಲಂಕರಿಸಿದ್ದು ನಾಡಿನ ಹೆಮ್ಮೆ. ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ, ದಲಿತರ ರೂವಾರಿ, ರಾಜ್ಯ ಕಾಂಗ್ರೆಸ್ ನಾಯಕ, ಯಶಸ್ವೀ ಮುಖ್ಯಮಂತ್ರಿ ಹಾಗೂ ಕೇಂದ್ರಗೃಹಸಚಿವರಾಗಿ ಗ್ಯಾನಿ ಜೈಲ್‍ಸಿಂಗ್ ಅವರ ಸಾರ್ವಜನಿಕ ಜೀವನ ವಿಭಿನ್ನ, ವಿಶಿಷ್ಟ ಹಾಗೂ ವಿಶಾಲ. ಸ್ವಾತಂತ್ರ್ಯಪೂರ್ವದಲ್ಲಿ ವಿದೇಶೀ ಆಳ್ವಿಕೆ, ಅರಸೊತ್ತಿಗೆ ಹಾಗೂ ಪಾಳೇಗಾರಿಕೆ ವಿರುದ್ಧ ಅವರದು ಸತತ ಹೋರಾಟ. ಕೋಮುವಾದ, ಆರ್ಥಿಕ ಅಸಮಾನತೆ ವಿರುದ್ಧ ಸಾಮಾಜಿಕ ನ್ಯಾಯಕ್ಕಾಗಿ ಅವರದು ನಿರಂತರ ಹೋರಾಟ. ಎತ್ತರದ ನಿಲುವು ಆಕರ್ಷಕ ಮೈಕಟ್ಟು, ಬಲು ಚೊಕ್ಕವಾಗಿ ಉಡುಪು ಧರಿಸುವ ಅಭಿರುಚಿ. ಅತ್ಯಂತ ಸರಳ, ದೈವಶ್ರದ್ಧೆಯ ನೈಜಮಣ್ಣಿನ ಮಗ. ಲೋಕತಂತ್ರದ ಮೌಲ್ಯಗಳಲ್ಲಿ ನೆಟ್ಟ ನಂಬಿಕೆ. ಭಾರತೀಯ ಸಾರ್ವಜನಿಕ ಜೀವನದಲ್ಲಿ ಸಹಜವಾಗಿಯೇ ಗ್ಯಾನಿ ಜೈಲ್‍ಸಿಂಗ್‍ರವರಿಗೆ ವಿಶಿಷ್ಟ ಸ್ಥಾನ.

	ಮೇ 5, 1916 ರಂದು ಫರೀದ್‍ಕೋಟ್ ಜಿಲ್ಲೆಯ ಸಂಧ್ವಾನ ಗ್ರಾಮದಲ್ಲಿ ಗ್ಯಾನಿ ಜೈಲ್‍ಸಿಂಗ್ ಜನನ. ಕರಕುಶಲ ಮನೆತನ; ಆದರೆ ಬೇಸಾಯವನ್ನು ಕಸುಬಾಗಿ ಮಾಡಿಕೊಂಡಿತ್ತು. ಅವರ ತಂದೆ ಸರ್ದಾರ್ ಕಿಶನ್‍ಸಿಂಗ್ ಅವರಿಗೆ ಸುಮಾರು 56 ಎಕರೆ ಜಮೀನಿತ್ತು. ಇದು ಗ್ಯಾನಿ ಜೈಲ್‍ಸಿಂಗ್ ಹಾಗೂ ಇನ್ನಿತರ ಇಬ್ಬರು ಸಹೋದರರೊಡನೆ ಹಂಚಿಕೆ ಆಯಿತು. ಪ್ರಭಾವ ಪ್ರತಿಷ್ಠೆಗಳಿಂದ ದೂರವಾದ ಕುಗ್ರಾಮವೊಂದರ ಮಣ್ಣಿನ ಜೋಪಡಿ ಮನೆಯಲ್ಲಿ ಹುಟ್ಟಿ ಬೆಳೆದವರು ಜೈಲ್‍ಸಿಂಗ್. ಅವರು ಬಟ್ಟೆ ಹೊಲಿದರು. ಕಲ್ಲು ಕತ್ತರಿಸಿದರು. ನೇಗಿಲು ಹಿಡಿದು ಬೇಸಾಯ ಮಾಡಿದರು. ರಸ್ತೆ ನಿರ್ಮಾಣದಲ್ಲೂ ದುಡಿದರು. ಬಾವಿ ತೋಡಿದರು. ಖಡ್ಗ ತಯಾರಿಸಿದರು. ಶ್ರೀಸಾಮಾನ್ಯನ ಅಳಲು ಆಶೋತ್ತರಗಳನ್ನು ಗ್ಯಾನೀಜೀ ಸ್ವತಃ ಕಂಡರು. ಇದೇ ಅವರಿಗೆ ಮೂಲ ಶಿಕ್ಷಣವಾಯಿತು. ಜತೆಗೆ ಸಿಖ್ ಪವಿತ್ರ ಗ್ರಂಥಗಳ ವ್ಯಾಸಂಗ. ಕುರಾನ್, ಗೀತೆ, ರಾಮಾಯಣಗಳ ಅಧ್ಯಯನ ಮಾಡಿದರು.

	ಬಾಲ್ಯದಿಂದಲೇ ಸಾಹಿತ್ಯ ಅಭಿರುಚಿ ಬೆಳೆಸಿಕೊಂಡ ಗ್ಯಾನೀಜೀ ಅವರ ಸಮವಯಸ್ಕರು ಮೆಟ್ರಿಕ್ ಪರೀಕ್ಷೆ ಪಾಸಾದರೆ ಇವರು ಸಿಖ್ ಧರ್ಮ ಸಿಖ್ಖರ ಇತಿಹಾಸ ಹಾಗೂ ಶಾಸ್ತ್ರಗಳ ಅಧ್ಯಯನ ಪೂರ್ಣಗೊಳಿಸಿದರು. ಹಿಂದಿ ಮತ್ತು ಉರ್ದು ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದರೂ ಅಷ್ಟಾಗಿ ಇಂಗ್ಲಿಷ್ ಬರುತ್ತಿರಲಿಲ್ಲ. ಸ್ವಂತ ಶಕ್ತಿಯಿಂದ ಮೇಲೆ ಬರುವ ಛಲ, ಗುರಿಸಾಧನೆಯ ತಾಳ್ಮೆ, ಶ್ರಮಪೂರ್ಣ ದುಡಿಮೆ, ಅಪ್ಪಟ ಪ್ರಾಮಾಣಿಕತೆ ಸಾಮಾನ್ಯ ಮನುಷ್ಯರನ್ನು ಅತ್ಯುನ್ನತ ಪದವಿಗೆ ಏರಿಸಬಲ್ಲದು ಎಂಬುದಕ್ಕೆ ಗ್ಯಾನಿ ಜೈಲ್‍ಸಿಂಗ್ ಒಂದು ನಿಚ್ಚಳ ನಿದರ್ಶನ.

	ಭಗತ್‍ಸಿಂಗ್ ಹಾಗೂ ಅವರ ಸಹಚರರು ಮಾರ್ಚಿ 23, 1931ರಂದು ಹುತಾತ್ಮರಾದಾಗ ತರುಣ ಗ್ಯಾನಿಗೆ 16 ವರ್ಷ. ಘಟನೆ ಗಾಢ ಪರಿಣಾಮ ಬೀರಿತು. 1938ರಲ್ಲಿ ಫರೀದ್‍ಕೋಟ್ ಪ್ರಾಂತ್ಯದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಶಾಖೆ ಆರಂಭವಾಗುವುದರೊಡನೆ ಜೈಲ್‍ಸಿಂಗ್‍ರವರ ಹೋರಾಟದ ಬದುಕು ಆರಂಭವಾಯಿತು. ಅಲ್ಲಿನ ಅರಸೊತ್ತಿಗೆ ಅವರನ್ನು ಸಾಮಾನ್ಯ ಅಪರಾಧಿಯೆಂದು ಪರಿಗಣಿಸಿತು. ಕಾಂಗ್ರೆಸ್ ಕಛೇರಿಯ ಆರಂಭ ಮಹಾರಾಜನ ದೃಷ್ಟಿಯಲ್ಲಿ ರಾಜದ್ರೋಹವಾಯಿತು. ಫರೀದ್‍ಕೋಟ್ ರಾಜ್ಯದಲ್ಲಿ ಕಾಂಗ್ರೆಸ್ ಸ್ಥಾಪನೆ ಮಾಡಿದರೆಂದು ಅವರಿಗೆ 5 ವರ್ಷಗಳ ಜೈಲುಶಿಕ್ಷೆ; ಏಕಾಂತ ವಾಸ, ಬಿಡುಗಡೆಯ ನಂತರವೂ ಅವರಿಗೆ ಕಿರುಕುಳ ಮುಂದುವರೆಯಿತು. ಸ್ವಲ್ಪ ಕಾಲ ರಾಜ್ಯದ ಹೊರಗುಳಿದರು. ತಮ್ಮ ರಾಜ್ಯದಲ್ಲಿ ಸ್ವಾತಂತ್ರ್ಯ ಚಳವಳಿಗೆ ಬೆಂಬಲವನ್ನು ರೂಢಿಸಿದರು. ಇದೇ ಸಮಯದಲ್ಲಿ ಮಹಾತ್ಮ ಗಾಂಧಿಯವರ ಅಹಿಂಸಾತತ್ತ್ವ ಇವರ ಮೇಲೆ ಪ್ರಭಾವ ಬೀರಿತು.

	ರಾಷ್ಟ್ರಪಿತ ಹಾಕಿದ ದಾರಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮ ಮುಂದುವರೆಸಲು 1946ರಲ್ಲಿ ಫರೀದ್‍ಕೋಟ್ ರಾಜ್ಯಕ್ಕೆ ಅವರು ಹಿಂತಿರುಗಿದರು. ರಾಷ್ಟ್ರಧ್ವಜ ಹಾರಿಸಲು ಈ ಫರೀದ್‍ಕೋಟ್ ರಾಜ್ಯ ಏಕವ್ಯಕ್ತಿಯಾಗಿ ಎದ್ದು ನಿಂತಿತು. ಆದರೆ ಅಲ್ಲಿನ ಮಹಾರಾಜ ಬರ್ಬರ ದಬ್ಬಾಳಿಕೆ ನಡೆಸಿದಾಗ ವಿಷಯ ಜವಹರಲಾಲ್ ನೆಹರುರವರಿಗೆ ತಿಳಿದು ರಾಷ್ಟ್ರಧ್ವಜ ಹಾರಿಸಲು ಫರೀದ್‍ಕೋಟ್‍ಗೆ ಹೋಗಲು ನೆಹರು ತೀರ್ಮಾನಿಸಿದರು. ಈ ಪ್ರಸಂಗದಿಂದ ಪಂಡಿತ್‍ಜೀಯವರ ಜೊತೆ ಗ್ಯಾನೀಜೀಯವರ ನಿಕಟ ಬಂಧುತ್ವ ಬೆಳೆಯಿತು. ಯುವ ಹೋರಾಟಗಾರನ ಬಗ್ಗೆ ಪಂಡಿತ್‍ಜೀಗೆ ಅಪಾರ ಅಭಿಮಾನ. ಫರೀದ್‍ಕೋಟ್‍ನಲ್ಲಿ ಪರ್ಯಾಯ ಸರ್ಕಾರದ ರಚನೆ ಗ್ಯಾನಿ ಜೈಲ್‍ಸಿಂಗ್‍ರವರ ಒಂದು ದೊಡ್ಡ ಸಾಹಸದ ಕ್ರಮ. ರಾಜನ ಸರ್ಕಾರದ ವಿರುದ್ಧ ಬಂಡಾಯ ಹೂಡಿದರೆಂಬ ಆರೋಪದ ಮೇಲೆ ಅವರನ್ನು ತಪ್ಪಿತಸ್ಥನೆಂದು ಬಂಧನ.

	ಸ್ವಾತಂತ್ರ್ಯಾನಂತರ ಶ್ರೀಮತಿ ಇಂದಿರಾಗಾಂಧಿಯವರ ನಿಕಟವರ್ತಿಯಾಗಿ ಗೃಹಸಚಿವ ಹುದ್ದೆಗೆ ಏರಿದ ಗ್ಯಾನೀಜೀ 1982ರ ಜುಲೈ 25ರಂದು ಭಾರತದ 7ನೆಯ ರಾಷ್ಟ್ರಪತಿಯಾಗಿದ್ದರು. 1987ರ ಜುಲೈ 25ರವರೆಗೆ ಆ ಹುದ್ದೆಯನ್ನು ಅಲಂಕರಿಸಿದ್ದರು. ಶ್ರೀಮತಿ ಇಂದಿರಾಗಾಂಧಿಯವರ ಅಮಾನುಷ ಹತ್ಯೆ, ತದನಂತರದ ರಾಜಕೀಯ ವಿದ್ಯಮಾನ ರಾಜೀವ್‍ಗಾಂಧಿ ಪ್ರಧಾನಿಯಾದದ್ದು ಆ ಸಮಯದಲ್ಲಿ ತಮ್ಮ ಸ್ವತಂತ್ರ ಮನೋಭಾವವನ್ನು ಕೆಲವು ಸಂದರ್ಭಗಳಲ್ಲಿ ಪ್ರಕಟಿಸಿದ್ದು ಜೈಲ್‍ಸಿಂಗ್‍ರವರ ವ್ಯಕ್ತಿತ್ವಕ್ಕೆ ಮೆರುಗು ತಂದುಕೊಟ್ಟಿತು. ಮುದ್ರಿತ ಭಾಷಣ ಮುಗಿಸಿ ಧಿಡೀರ್ ತಮ್ಮ ಅನಿಸಿಕೆಗಳನ್ನು ಪ್ರಕಟಿಸಿಬಿಡುತ್ತಿದ್ದ ಗ್ಯಾನಿ ಜೈಲ್‍ಸಿಂಗ್‍ರವರು ಸದಾ ನಗುಮೊಗದ ಸಜ್ಜನಿಕೆಯ ಸರಳಮೂರ್ತಿ.					(ಕೆ.ಎಸ್.ಅಚ್ಯುತನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ